ಅಧಿಷ್ಠಾನ
	ಎಂದರೆ ಆಶ್ರಯ. ಪ್ರಮುಖವಾಗಿ ಇದು ವೇದಾಂತದ ಪರಿಭಾಷೆಯಲ್ಲಿ ಬಳಕೆಯಲ್ಲಿದೆ. ಅಭ್ಯಾಸವಾದದಲ್ಲಿ ಅಧಿಷ್ಠಾನದ ಪ್ರಸ್ತಾಪ ವಿಶೇಷವಾಗಿ ಬರುತ್ತದೆ. ಅಭ್ಯಾಸಕ್ಕೆ ಸಾಕ್ಷಿ-ಚೈತನ್ಯವೇ ಅಧಿಷ್ಠಾನ; ರಜ್ಜುಸರ್ಪನ್ಯಾಯದಲ್ಲಿ ಸರ್ಪಭ್ರಾಂತಿಗೆ ರಜ್ಜುವೇ ಅಧಿಷ್ಠಾನ. ಹಗ್ಗವಿಲ್ಲದಿದ್ದರೆ ಹಾವೆಂಬ ನೋಟ ಬರಲಾರದಷ್ಟೆ; ಹಾಗೆಯೇ ಸಾಕ್ಷಿಚೈತನ್ಯದ ವಿವರ್ತವೇ ಪ್ರಪಂಚವೆಂದು ಕಾಣಿಸಿಕೊಳ್ಳುವುದು. ಸ್ವರೂಪದಲ್ಲಿ ಮಿಥ್ಯೆಯಾಗಿದ್ದರೂ ದೃಶ್ಯವಾಗಿ ತೋರುವುದು ಅಭ್ಯಾಸದ ಬಲದಿಂದ; ಇದಕ್ಕೆ ಆತ್ಮಪದಾರ್ಥವೇ ಅಧಿಷ್ಠಾನ. ನಿತ್ಯಶುದ್ಧಬುದ್ಧ ಮುಕ್ತವಾದ ಈ ಆತ್ಮದ ಮೇಲೆ ವ್ಯಾವಹಾರಿಕಾತ್ಮ ಆಧ್ಯಾರೋಪಿತವಾಗುತ್ತದೆ; ಹೀಗಾಗಿ ತಾನು ಅಶುದ್ಧ, ಬದ್ಧ, ಅಲ್ಪಜ್ಞ, ಅಶಕ್ತ ಎನ್ನುವ ಭ್ರಮೆ ತಲೆದೋರುತ್ತದೆ. ಅಧಿಷ್ಠಾನದ ಸಾಕ್ಷಾತ್ಕಾರವೇ ಮುಕ್ತಿಯೆನಿಸಿಕೊಳ್ಳುತ್ತದೆ.               
  
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ